ಮೂಡಬಿದರೆ
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಒಂದು ಪಟ್ಟಣ. ದಕ್ಷಿಣ ಭಾರತದ ಜೈನಕಾಶಿಯೆಂದು ಖ್ಯಾತಿವೆತ್ತ ತೀರ್ಥಕ್ಷೇತ್ರ. ಮಂಗಳೂರು-ಕಾರ್ಕಳ ರಸ್ತೆಯಲ್ಲಿ ಮಂಗಳೂರಿನ ಈಶಾನ್ಯಕ್ಕೆ 35 ಕಿಮೀ ದೂರದಲ್ಲಿದೆ. ಜನಸಂಖ್ಯೆ 25,610 (2001). 17ನೆಯ ಶತಮಾನದಲ್ಲಿ ಇದು ಪುತ್ತಿಗೆಯ ಚೌಟರಸರ ರಾಜಧಾನಿಯಾಗಿತ್ತು.

	ಶಾಸನಗಳಲ್ಲಿ ಬಿದರೆ ಎಂದು ಸಾಮಾನ್ಯವಾಗಿ ಕರೆಯಲಾಗುವ ಮೂಡಬಿದರೆ ಪ್ರಾಚೀನ ಕಾಲದಿಂದಲೂ ಜೈನಮತಕ್ಕೆ ಹೆಸರಾದ ಊರು. ಒಂದು ಕಾಲದಲ್ಲಿ ಅಧಿಕ ಜನಸಂಖ್ಯೆಯ ಊರಾಗಿದ್ದರೂ ಕಾಲಾಂತರದಲ್ಲಿ ಜನವಾಸ ಕಡಿಮೆಯಾಗಿ ನೆಲ ಹಾಳುಬಿದ್ದು ಎಲ್ಲೆಲ್ಲೂ ಬಿದಿರಿನ ಮೆಳೆಗಳು ಬೆಳೆದುಕೊಂಡವು. ಒಮ್ಮೆ ಶ್ರವಣ ಬೆಳಗೊಳದಿಂದ ಇಲ್ಲಿಗೆ ಬಂದ ಓರ್ವ ಜೈನ ಗುರುವಿನ ಆದೇಶದಂತೆ ಬಿದಿರ ಹಿಂಡಲುಗಳನ್ನು ಕಡಿದು ನೆಲ ಅಗೆದಾಗ ಅಲ್ಲೊಂದು ಪಾಶ್ರ್ವನಾಥಸ್ವಾಮಿ ವಿಗ್ರಹ ದೊರಕಿತು. ಸಮೀಪದಲ್ಲಿ ನೆಲೆಸಿದ್ದ ಜೈನರು ಅಲ್ಲಿಯೇ ಒಂದು ಬಸದಿ ಕಟ್ಟಿಸಿ ಆ ಪ್ರತಿಮೆಯನ್ನು ಅದರಲ್ಲಿ ಪ್ರತಿಷ್ಠಾಪಿಸಿದರು. ಈ ಬಸದಿಗೆ ಹಳೇಬಸದಿ ಅಥವಾ ಗುರು ಬಸದಿ ಎಂಬ ಹೆಸರು ಬಂತು. ಈಗಲೂ ಇಲ್ಲಿಯ ಜೈನ ಪೀಠಾಧಿಪತಿಗಳಿಗೆ ಪಟ್ಟವಾಗುವುದು ಈ ಬಸದಿಯಲ್ಲಿಯೇ. ಚರಿತ್ರೆಯ ವಿವರಣೆಗಳಲ್ಲೂ, ಶಾಸನಗಳಲ್ಲೂ ಮೂಡಬಿದರೆ ಒಂದು ನಗರವೆಂದು ಪ್ರಸಿದ್ಧವಿದ್ದು ಎಂಟುಮಂದಿ ಸೆಟ್ಟಿಕಾರರ. (ವ್ಯಾಪಾರಸ್ಥರು) ಮತ್ತು ನಾಲ್ವರು ಎಳಮೆಗಳು (ವ್ಯವಸಾಯಗಾರರು) ಇದನ್ನು ಆಳುತ್ತಿದ್ದರೆಂದು ತಿಳಿದುಬರುತ್ತದೆ.

	ಮೂಡಬಿದರೆಯಲ್ಲಿ 18 ಬಸದಿಗಳಿವೆ. ಸಾವಿರ ಕಂಬಗಳ ಬಸದಿ ಎಂದು ಪ್ರಖ್ಯಾತವಾಗಿರುವ ತ್ರಿಭುವನತಿಲಕ ಚೂಡಾಮಣಿ ಚೈತ್ಯಾಲಯ ಇಲ್ಲಿಯ ಮುಖ್ಯ ಆಕರ್ಷಣೆ. ದಕ್ಷಿಣಭಾರತದಲ್ಲೇ ಉತ್ಕøಷ್ಟವಾಗಿರುವ ವಾಸ್ತು ನಿರ್ಮಾಣಗಳ ಪೈಕಿ ಇದೊಂದು. ಇದನ್ನು 1431ರಲ್ಲಿ ನಿರ್ಮಿಸಿಲಾಯಿತೆಂದು ಇಲ್ಲಿಯ ಗದ್ದಿಗೆ ಮಂಟಪದಲ್ಲಿರುವ ಶಿಲಾಲೇಖದಲ್ಲಿ ಉಲ್ಲೇಖಿಸಲಾಗಿದೆ. ಕಗ್ಗಲ್ಲಿನಿಂದ ನಿರ್ಮಿತವಾದ ಈ ಕಟ್ಟಡದ ಲಾವಣ್ಯ ಅನುಪಮವಾದದ್ದು. ಗರ್ಭಗುಡಿಯ ಮುಂದೆ ಮೂರು ಮಂಟಪಗಳು ಸಾಲಾಗಿವೆ. ಇವನ್ನು ಒಟ್ಟಾಗಿ ಪ್ರಾಕಾರ ಸುತ್ತುವರಿದಿದೆ. ಈ ಬಸದಿಯ ಬಹುಸಂಖ್ಯಾತ ಕಂಬಗಳಲ್ಲಿ ಯಾವುದೇ ಒಂದು ಕಂಬದ ಕೆತ್ತನೆ ಇನ್ನೊಂದರಂತಿಲ್ಲವೆಂಬ ವೈಶಿಷ್ಟ್ಯ ಪಡೆದಿದೆ. ಇಲ್ಲಿ ಗೋಡೆಗಳಲ್ಲಿಯೂ ಕಂಬಗಳಲ್ಲಿಯೂ ಕೆತ್ತಲ್ಪಟ್ಟ ಹೂ, ಹಣ್ಣುಗಳು, ಬಳ್ಳಿ, ಮೃಗಪಕ್ಷಿಗಳ ಮತ್ತು ದೇವಾಸುರರ ಗೊಂಬೆಗಳ ಅಲಂಕಾರಿಕ ನೈಪುಣ್ಯ ಅಸದೃಶವಾಗಿದೆ. ಈ ಬಸದಿಯ ಮುಂಭಾಗದಲ್ಲಿ 16ಮೀ ಎತ್ತರದಲ್ಲಿರುವ ಮಾನಸ್ತಂಭ ನಕ್ಷತ್ರಾಕಾರದ ಮಂಟಪ ಭವ್ಯ ಮತ್ತು ಆಕರ್ಷಣೀಯ, ಪ್ರಾಯಶಃ ದಕ್ಷಿಣ ಭಾರತದಲ್ಲೇ ಅತಿ ದೊಡ್ಡದಾದ ಚಂದ್ರನಾಥ ಸ್ವಾಮಿ ತೀರ್ಥಂಕರನ ಮೂರ್ತಿ ಈ ಬಸದಿಯಲ್ಲಿದೆ. ಈ ಮೂರ್ತಿ ಪಂಚಲೋಹದ್ದು. ಎತ್ತರ ಸುಮಾರು 21.3 ಸೆಂಮೀ. ಪ್ರತಿವರ್ಷ ಚೈತ್ರಮಾಸದ ಪೂರ್ಣಿಮೆಯ ದಿನ ಇಲ್ಲಿ ರಥೋತ್ಸವ ನಡೆಯುತ್ತದೆ.

	ಇಲ್ಲಿಯ ಬೆಟ್ಟಕೇರಿಯಲ್ಲಿ ಮುಡಿಂಜಿ (ಮುಡಿಜ) ಎಂಬ ಜೈನ ಸ್ಮಾರಕಗಳಿವೆ. ಎತ್ತರಕ್ಕೆ ಹೋದಂತೆ ಸಪೂರವಾಗುವ ಟಿಬೆಟ್ಟಿನ ಸ್ತೂಪಗಳ ರೀತಿಯಲ್ಲಿರುವ ಈ ರಚನೆಗಳು ವಿಚಿತ್ರ ತರದವಾಗಿದೆ. ಇಲ್ಲಿಯ ಬಸ್ ನಿಲ್ದಾಣದ ಸಮೀಪವಿರುವ ಚೌಟರಸರ ಅರಮನೆ ಈಗ ಹಾಳಾಗಿದ್ದರೂ ಅದರ ಬಲು ಸೊಗಸಾದ ಮರದ ಕೆತ್ತನೆಯ ಜಾಲಾಕ್ಷ ಕಿಟಕಿಗಳೂ ಕಂಬಗಳೂ ನೇತ್ರಾನಂದಕರ. ಮೂಡಬಿದರೆಯ ಈಶಾನ್ಯದಲ್ಲಿ ಪೂರ್ವಕಾಲದ ವೈಭವವನ್ನು ಸೂಚಿಸತಕ್ಕ ಕೋಟೆ ಇದೆ. ಇದರಲ್ಲಿ ಹನ್ನೊಂದು ಬತೇರಿಗಳುಂಟು. ಇಲ್ಲೊಂದು ಹನುಮಂತ ಗುಡಿಯೂ ಇದೆ.

	ಗಜಪೃಷ್ಠಾಕಾರದ ಮಹಿಷಮರ್ದಿನಿಯ ಗೌರೀದೇಗುಲ, ಗೋಪಾಲಕೃಷ್ಣ ಮಂದಿರ, ವೆಂಕಟರಮಣ ದೇವಾಲಯ ಮತ್ತು ಮಹಾಲಸದೇವಾಲಯ ಸಹ ಇಲ್ಲಿವೆ. ಈ ಊರಿನ ಜೈನಮಠ ಪ್ರಸಿದ್ಧವಾದ್ದು. ಅಭಿನವ ಚಾರುಕೀರ್ತಿ ಪಂಡಿತಾಚಾರ್ಯ ಎಂಬುದು ಇಲ್ಲಿಯ ಆಚಾರ್ಯರ ಬಿರುದು. ಇಲ್ಲಿ ಎರಡು ಚರ್ಚುಗಳೂ ಮೂರು ಮಸೀದಿಗಳೂ ಇವೆ. ಪಟ್ಟಣದ ಸಮೀಪದಲ್ಲಿ ಪೂರ್ವಕ್ಕೆ ಸುಮಾರು 2 ಕಿ ಮೀ ದೂರದಲ್ಲಿ ಕೋಡಂಕಲ್ಲು (ಕೊಡಂಜೆ ಕಲ್ಲು) ಎಂಬ ಎರಡು ಕೋಡುಗಳುಳ್ಳ 277 ಮೀ ಎತ್ತರದ ಬೆಟ್ಟವಿದೆ. ಈ ಬೆಟ್ಟದ ಮೇಲೆ ಒಂದು ನ್ಯಾಯ ಬಸದಿ ಇದೆ. ಇಲ್ಲಿ ಹಿಂದೆ ಅಪರಾಧಿಗಳ ವಿಚಾರಣೆ ನಡೆಯುತ್ತಿತ್ತಂತೆ.

	ಮೂಡಬಿದರೆಯಲ್ಲಿ ಪ್ರತಿ ಶುಕ್ರವಾರ ಸಂತೆ ನಡೆಯುತ್ತದೆ. ಇಲ್ಲಿ ಪುರಸಭೆ, ಕಾಲೇಜು, ಪ್ರೌಢಶಾಲೆ, ಮತ್ತು ಇತರ ಶಾಲೆಗಳು ಇವೆ. ಅನಾನಸು (ನೆಲ ಹಲಸು) ನಾರು ಸಂಶೋಧನಾ ಕೇಂದ್ರವೊಂದು ಇಲ್ಲಿದೆ. ಪ್ರವಾಸಿ ಮಂದಿರ, ಪ್ರಾಥಮಿಕ ಆರೋಗ್ಯಕೇಂದ್ರಗಳೂ ಇವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ